ಹೆಲನ್ 
ಪ್ರಾಚೀನ ಗ್ರೀಕ್ ದಂತಕಥೆಗಳ ಪ್ರಕಾರ ಆ ಕಾಲದ ಅಪ್ರತಿಮ ಸುಂದರಿ ಹಾಗೂ ಪರೋಕ್ಷವಾಗಿ ಟ್ರೋಜನ್ ಮಹಾಯುದ್ಧಗಳಿಗೆ ಕಾರಣಕರ್ತಳು. ಈಕೆ ಸ್ಪಾರ್ಟದ ರಾಜ ಟಿಂಡ್ರಾಯಸ್‍ನ ರಾಣಿ. ಲೀಡ ಮತ್ತು ಜ್ಯೂಸ್ ದೇವತೆಯ ಮಗಳು. ಜ್ಯೂಸ್ ಲೀಡಳಲ್ಲಿ ಮೋಹಗೊಂಡು ಹಂಸರೂಪದಲ್ಲಿ ಆಕೆಯನ್ನು ಮೋಹಿಸಿದಾಗ ಇವಳು ಮೊಟ್ಟೆಯ ರೂಪದಲ್ಲಿ ಕ್ರಿ.ಪೂ.1214ರಂದು ಜನಿಸಿದಳು. ಈಕೆಯ 10ನೆಯ ವಯಸ್ಸಿನಲ್ಲಿ ಅವಳ ಸೌಂದರ್ಯಕ್ಕೆ ಮನಸೋತ ಡಯೋನೀಸಸ್ ಅವನ ಸ್ನೇಹಿತ ಪೆಂಥಿಯಸನ ಸಹಾಯದಿಂದ ಅರ್ಥೆಮಿನ್ ಓರ್ಥಿಯಾ ದೇವಾಲಯದಲ್ಲಿ ನೃತ್ಯ ಮಾಡುತ್ತಿದ್ದ ಈಕೆಯನ್ನು ಅಪಹರಿಸಿ ಅಟಿಕ ಎಂಬಲ್ಲಿಗೆ ಕರೆತಂದು ವಿವಾಹವಾದ (ಕ್ರಿ.ಪೂ.1202). ಆಕೆ ಒಂದು ಮಗುವಿಗೆ ಜನ್ಮವಿತ್ತಳು. ಅನಂತರ ಈಕೆಯ ಸಹೋದರರಾದ ಕ್ಯಾಸ್ಟರ್ ಮತ್ತು ಪೊಲಾಕ್ಸ್ ತಮ್ಮ ಸೈನ್ಯ ಬಲದಿಂದ ಸುರಕ್ಷಿತವಾಗಿ ಇವಳನ್ನು ಸ್ಪಾರ್ಟಕ್ಕೆ ಕರೆತಂದರು. ಗ್ರೀಸ್‍ನ ಎಲ್ಲ ಯುವ ರಾಜಕುಮಾರರು ಇವಳನ್ನು ವಿವಾಹವಾಗಲು ಮುಂಚೂಣಿಯಲ್ಲಿದ್ದರು. ಯುವರಾಜ ಯೂಲಿಸಸ್ ವಿವಾಹ ಪ್ರಸ್ತಾಪವನ್ನು ಈಕೆಯ ತಂದೆ ಟಿಂಡ್ರಾಯಸ್‍ನ ಮುಂದಿಟ್ಟ. ಆಗ ಅವನು ಮುಂಚೂಣಿಯಲ್ಲಿದ್ದ ಯುವರಾಜರಲ್ಲಿ “ಅವಳಿಗೆ ಇಷ್ಟವಾದವರನ್ನು ಆಕೆ ಮದುವೆಯಾಗಬಹುದು, ಯಾರಾದರೂ ಅವಳನ್ನು ಆಕೆಯ ಗಂಡನಿಂದ ಬೇರ್ಪಡಿಸಲು ಯತ್ನಿಸಿದಲ್ಲಿ ನೀವೆಲ್ಲರೂ ಒಗ್ಗಟ್ಟಿನಿಂದ ವಿರೋಧಿಸಬೇಕು” ಎಂದು ಬೇಡಿಕೆ ಇಟ್ಟ. ಇವಳು ಆಗ ಮೆನಲಾಸ್‍ನನ್ನು ಆಯ್ಕೆ ಮಾಡಿ ಮದುವೆಯಾಗಿ ಹರ್ಮಿಯೋನ್‍ಗೆ ಜನ್ಮವಿತ್ತಳು (ಕ್ರಿ.ಪೂ. 1201). ಇವರ ವೈವಾಹಿಕ ಜೀವನ ಸು. 3 ವರ್ಷ ಸುಖಮಯವಾಗಿತ್ತು. ಅನಂತರ ಈಕೆಯ ಮೋಹಕ್ಕೆ ಸಿಲುಕಿದ ಪ್ರಿಯಾಮ್‍ರಾಜನ ಮಗ ಪ್ಯಾರಿಸ್ ಅಪ್ರೊಡೇಟ್ ದೇವತೆ ಕೊಟ್ಟ ಚಿನ್ನದ ಸೇಬನ್ನು ಕೊಡುವುದರ ಮೂಲಕ ಇವಳನ್ನು  ಒಲಿಸಿಕೊಂಡು ಮೆನಲಾಸನ ಅನುಪಸ್ಥಿತಿಯಲ್ಲಿ ಟ್ರಾಯ್‍ಗೆ ಕರೆತಂದ (ಕ್ರಿ.ಪೂ.1195). ಮೆನಲಾಸ್ ಗ್ರೀಕಿನ ಎಲ್ಲ ರಾಜರುಗಳನ್ನು ಸೇರಿಸಿ ಪ್ಯಾರಿಸ್‍ನೊಂದಿಗೆ ಯುದ್ಧಕ್ಕೆ ಹೊರಟ. ಇದೇ ಪ್ರಸಿದ್ಧ ಟ್ರೋಜನ್ ಮಹಾಯುದ್ಧ(ಕ್ರಿ.ಪೂ.1186). ಸತತವಾಗಿ ಯುದ್ಧ ನಡೆದು, ಕೊನೆಗೆ 9ನೆಯ ವರ್ಷದಲ್ಲಿ ಪ್ಯಾರಿಸ್‍ನನ್ನು ಹತ್ಯೆಗೈಯಲಾಯಿತು. ಅನಂತರ ಇವಳು ಪ್ರಿಯಾಮ್‍ನ ಇನ್ನೊಬ್ಬ ಮಗ ಥಿಯೋಪೊಬನ್‍ನ ಜೊತೆ ವಿವಾಹವಾದಳು. ಯೂಲಿಸಸ್‍ನ ಸಹಾಯದಿಂದ ಮೆನಲಾಸ್ ಟ್ರಾಯ್ ನಗರವನ್ನು  ಸಂಪೂರ್ಣ ಆಕ್ರಮಿಸಿದ(ಕ್ರಿ.ಪೂ.1176). ಮೆನಲಾಸ್ ಇವಳನ್ನು ಶಿಕ್ಷಿಸಲು ಮುಂದಾದನಾದರೂ ಇವಳ ಸೌಂದರ್ಯಕ್ಕೆ ಸೋತು, ಯಾವುದೇ ವಿರೋಧವಿಲ್ಲದೆ ಸ್ಪಾರ್ಟಕ್ಕೆ ಕರೆತಂದ. ಮೆನಲಾಸನ ನಿಧನಾನಂತರ ಇವಳ ಮಲಮಗ ಇವಳನ್ನು ಗ್ರೀಕ್‍ನಿಂದ ಹೊರಹಾಕಿದಾಗ ರ್ಹೋಡ್ಸ್‍ನಲ್ಲಿ ನೆಲೆಸಿದಳು. ಐತಿಹ್ಯವೊಂದರ ಪ್ರಕಾರ ಹಿಂದೆ ಇವಳನ್ನು ಮದುವೆಯಾಗಲು ಬಯಸಿದ್ದ ಲ್ಯೂಕೆ ದ್ವೀಪದ ಅಖಿಲಸ್‍ನೊಂದಿಗೆ ವಿವಾಹವಾದಳು. ಅನಂತರ ರ್ಹೋಡ್ಸ್ ದ್ವೀಪದ ರಾಣಿ ಪಾಲಿಕ್ಸೊ ಟ್ರಾಯ್ ಕದನದಲ್ಲಿ ಹತ್ಯೆಯಾದ ತನ್ನ ಗಂಡ ಟ್ಲೆಪೂಲಿಮಸ್‍ನ ಸಾವಿನ ಸೇಡು ತೀರಿಸಿಕೊಳ್ಳಲು ಇವಳನ್ನು ಮರಕ್ಕೆ ನೇಣು ಹಾಕಿ (ಕ್ರಿ.ಪೂ.1146)  ಥಿರೊಪಿನದಲ್ಲಿ ಸಮಾಧಿ ಮಾಡಿಸಿದಳು. ರ್ಹೋಡ್ಸ್‍ನ ಜನ ಇವಳನ್ನು ಸೌಂದರ್ಯದೇವತೆ ಎಂದೂ ನೇಣಿಗೇರಿಸಿದ ಮರ ಥೆಂಡ್ರಿಟಿಸ್‍ನ್ನು ಮರಗಳ ದೇವತೆ ಎಂದೂ ಆರಾಧಿಸತೊಡಗಿದರು. ಆ ಸ್ಥಳದಲ್ಲಿ ಅವಳ ಮತ್ತು ಮರದ ಗೌರವಾರ್ಥ ಒಂದು ದೇವಾಲಯವನ್ನೂ ಕಟ್ಟಲಾಯಿತು. ಸ್ಟೆಟಿಕೊರಸ್ ಪ್ರಕಾರ ಪ್ಯಾರಿಸ್ ಇವಳನ್ನು ಕೊಂಡೊಯ್ಯುವಾಗ ಅವರ ಹಡಗು ಈಜಿಪ್ಟ್ ತೀರ ತಲಪಿತು. ಅಲ್ಲಿಯ ರಾಜ ಪ್ರೊಟಿಯಸ್ ನಿಜವಾದ ಹೆಲನ್‍ಳನ್ನು ರಕ್ಷಿಸಿ ಈಕೆಯ ಪ್ರತಿರೂಪದ ಪ್ರೇತವನ್ನು ಪ್ಯಾರಿಸ್‍ನ ಜೊತೆ ಕಳುಹಿಸಲಾಯಿತು ಎನ್ನಲಾಗಿದೆ. ಹೆರೋಡೋಟಸ್ ಮತ್ತು ಯೂರಿಪಿಡೀಸ್‍ರ ಪ್ರಕಾರ ಇವಳನ್ನು ಟ್ರಾಯ್ ಯುದ್ಧದ ಅನಂತರ (ಕ್ರಿ.ಪೂ.1168) ಮೆನಲಾಸ್‍ಗೆ ಒಪ್ಪಿಸಲಾಯಿತು.											
(ಆರ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ